ರಾಜನ್ - ನಾಗೇಂದ್ರ
ಕನ್ನಡದ ಶಂಕರ್-ಜೈಕಿಷನ್, ಲಕ್ಷ್ಮೀಕಾಂತ-ಪ್ಯಾರೇಲಾಲ್ ಎಂದೆಲ್ಲಾ ಕರೆಸಿಕೊಂಡ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕರ ಜೋಡಿಯೆಂದರೆ ರಾಜನ್-ನಾಗೇಂದ್ರರ ಜೋಡಿ. ರಾಜನ್ ಮತ್ತು ನಾಗೇಂದ್ರ ಇಬ್ಬರೂ ಸೋದರರು. ರಾಜನ್ 1933ರಲ್ಲಿ ನಾಗೇಂದ್ರ 35ರಲ್ಲಿ ಮೈಸೂರಿನಲ್ಲಿ ಹುಟ್ಟಿದವರು. ಇವರ ತಂದೆ ಬಿ.ರಾಜಪ್ಪ ಮೈಸೂರಿನಲ್ಲಿ ಸಂಗೀತ ವಿದ್ವಾಂಸರಾಗಿ ಹೆಸರಾದವರು. ನಾಗೇಂದ್ರರಿಗೆ ಶಾರೀರ ಅವರ ತಂದೆಯಿಂದ ಬಂದ ಬಳುವಳಿ. ರಾಜನ್ ಉತ್ತಮ ಪಿಟೀಲುವಾದಕ. ಸಂಗೀತದಲ್ಲಿ ಪರಿಶ್ರಮವಿದ್ದಜೋಡಿ.  ಬೆಂಗಳೂರಿನ ಆ ಕಾಲದ ಪ್ರಸಿದ್ಧ ಜಯಮಾರುತಿ ಸಂಗೀತ ವಾದ್ಯವೃಂದದಲ್ಲಿ ಸೇರಿ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನೀಡಿದ್ದರು. ಆ ದಿನಗಳಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರೆನಿಸಿದ್ದ ಹೆಚ್.ಆರ್.ಪದ್ಮನಾಭಶಾಸ್ತ್ರಿ ಅವರ ಬಳಿ ಸಹಾಯಕರಗಿ ದುಡಿಯುತ್ತಾ ರಾಜನ್ ಧ್ವನಿಮುದ್ರಣ ತಂತ್ರದಲ್ಲಿ ಅನುಭವ ಪಡೆದರು. ಮಹಾತ್ಮ ಸಂಸ್ಥೆಯವರ ``ಶ್ರೀನಿವಾಸ ಕಲ್ಯಾಣ'' ಕನ್ನಡ ಚಿತ್ರಕ್ಕಾಗಿ ಪಿ.ಶಾಮಣ್ಣ ಅವರ ಸಂಗೀತ ನಿರ್ದೇಶನದಲ್ಲಿ  ಎರಡು ಗೀತೆಗಳನ್ನು ಅಮೀರ್ ಬಾಯಿ ಕರ್ನಾಟಕೆ ಅವರ ಜೊತೆಯಲ್ಲಿ ಹಾಡಿ ನಾಗೇಂದ್ರ ಹಿನ್ನೆಲೆಗಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿದರು.

ಮಹಾತ್ಮ ಸಂಸ್ಥೆಯವರು 1952ರಲ್ಲಿ ತಯಾರಿಸಿದ ``ಸೌಭಾಗ್ಯಲಕ್ಷ್ಮಿ ಚಿತ್ರದ ಸಂಗೀತ ಸಂಯೋಜನೆ ಮಾಡುವ ಮೂಲಕ ರಾಜನ್-ನಾಗೇಂದ್ರರ ಜೋಡಿ ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕರಾದರು. ವಿಠಲಾಚಾರ್ಯರ ನಿರ್ದೇಶನದಲ್ಲಿ ಚಂಚಲಕುಮಾರಿ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಈ ಸಹೋದರರು ಮದರಾಸಿಗೆ ಹೋದರು. ಅಲ್ಲಯೇ ನೆಲೆ ನಿಂತರು. ಈ ಜೋಡಿ ಸಂಗೀತ ಸಂಯೋಜಿಸಿದ ಕನ್ನಡ, ತೆಲಗು, ತಮಿಳು ಚಿತ್ರಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು. ಸಿಂಹಳಿ ಭಾಷೆಯ ವೀರವಿಜಯ ಚಿತ್ರಕ್ಕೂ ಸಂಗೀತ ನೀಡಿದ್ದರು. ಶಂಕರಸಿಂಗ್, ಬಿ.ವಿಠಲಾಚಾರ್ಯ, ದೊರೆ-ಭಗವಾನ್‍ರ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವ ಈ ಜೋಡಿ ಅತ್ಯಂತ ಜನಪ್ರಿಯವಾಗಿತ್ತು. ಇವರ ನಿರ್ದೇಶನದಲ್ಲಿ ರೂಪುಗೊಂಡ ಮಧುರ ಗೀತೆಗಳು ಜನಮನದಲ್ಲಿ ಇಂದಿಗೂ ಚಿರಂಜೀವಿಯಾಗಿವೆ. ಜೊತೆಗೆ ನಾಗೇಂದ್ರ ಅವರು ಹಾಡಿರುವ ಹಾಡುಗಳೂ ಸಹ ಜನಪ್ರಿಯತೆ ಪಡೆದಿವೆ. ನಾಗೇಂದ್ರ ಹಾಡಿದ ನಮ್ಮೂರೆ ಚೆಂದ ಅತ್ಯಂತ ಜನಪ್ರಿಯ ಹಾಡು. 1961ರ ಪ್ರವಾಹ ಪರಿಹಾರ ನಿಧಿ ಸಂಗ್ರಹ ಯಾತ್ರೆಯಲ್ಲಿ ಹೋದಡೆಯಲ್ಲೆಲ್ಲಾ ಜನ ಅವರಿಂದ ಕಡ್ಡಾಯವಾಗಿ  ಹಾಡಿಸಿ ಖುಷಿ ಪಡುತ್ತಿದ್ದರು. 

``ಎರಡು ಕನಸು ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ 1973-74ನೇ ಸಾಲಿನ ರಾಜ್ಯಸರ್ಕಾರದ ಪ್ರಶಸ್ತಿ ಪಡೆದಿದ್ದಾರೆ. 1978-79ರಲ್ಲಿ ``ಪರಸಂಗದ ಗೆಂಡೆತಿಮ್ಮ ಚಿತ್ರದಲ್ಲಿನ ರಾಗ ಸಂಯೋಜನೆಗಾಗಿ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯ ಎರಡನೆ ಬಾರಿಗೆ ದೊರೆಯಿತು.

ರಾಜನ್-ನಾಗೇಂದ್ರರ ಈ ಜೋಡಿಯಲ್ಲಿ ಕಿರಿಯರಾದ-ಗಾಯಕ ನಾಗೇಂದ್ರ ಅವರು ಸುದೀರ್ಘಕಾಲದ ಅಸ್ವಸ್ಥತೆಯಿಂದಾಗಿ 2000ದ ಅಕ್ಟೋಬರ್ 4ರಂದು ನಿಧನರಾದರು. ತಮ್ಮನ ಅಗಲಿಕೆ-ಜೋಡಿಯು ಒಡೆದು ಉಂಟಾದ ಏಕಾಂಗಿತನ ಹಾಗೂ ಇಳಿ ವಯಸ್ಸಿನ ಪರಿಣಾಮ ರಾಜನ್‍ರನ್ನು ಹಣ್ಣಾಗಿಸಿದೆ.
	(ಶ್ರೀಕೃಪಾ.;ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ